    ಮೂಲದೊಡನೆ ಪರಿಶೀಲಿಸಿ

ಅನಿವಾಸಿ ಠೇವಣಿಗಳು

	ಅನಿವಾಸಿ ಠೇವಣಿಗಳು ಎಂದರೆ ಭಾರತದಿಂದ ವಿದೇಶದಲ್ಲಿ ಹೋಗಿ ನೆಲೆಸಿ ಸಂಪಾದಿಸಿ ಅಲ್ಲಿಂದ ಭಾರತದ ತನ್ನಲ್ಲಿನ ಊರಿನ ಬ್ಯಾಂಕಿನ ಖಾತೆಗೆ ರವಾನಿಸುವ ಹಣವನ್ನು ಅನಿವಾಸಿ ಭಾರತೀಯರ ಠೇವಣಿ ಎನ್ನಬಹುದು. ಪ್ರತಿಯೊಬ್ಬ ಅನಿವಾಸಿ ಭಾರತೀಯನಿಗೆ ಬ್ಯಾಂಕಿನ ಖಾತೆಯು ಬಹುಮುಖ್ಯವಾದುದು. ಅದರಲ್ಲೂ ಬ್ಯಾಂಕಿನ ಖಾತೆಯು ರಾಷ್ಟ್ರೀಕೃತ ಬ್ಯಾಂಕು, ಬಹುರಾಷ್ಟ್ರೀಯ ಸಂಸ್ಥೆಗಳ ಬ್ಯಾಂಕು, ವಿದೇಶೀ ಬ್ಯಾಂಕು ಅಥವಾ ಇನ್ನ್ಯಾವುದೇ ದೊಡ್ಡ ಬ್ಯಾಂಕಾದರೆ ಉತ್ತಮ. ಯಾಕೆಂದರೆ ವಿದೇಶೀ ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಅನುಮತಿಯಿಲ್ಲದೆ ಭಾರತದಲ್ಲಿರುವ ಯಾವುದೇ ಬ್ಯಾಂಕು ವಿದೇಶೀ ವಿನಿಮಯ ವ್ಯವಹಾರವನ್ನು ನಡೆಸುವಂತಿಲ್ಲ.

	ಯಾವುದೇ ವ್ಯಕ್ತಿ, ಸಂಸ್ಥೆಗೆ ಹಲವಾರು ಉದ್ದೇಶಗಳಿಗೆ ಹಣ ಬೇಕೇ ಬೇಕು. ಹಣ ಇದ್ದಷ್ಟೂ ವ್ಯವಹಾರದಲ್ಲಿ ದೃಢತೆ, ಆತ್ಮ ವಿಶ್ವಾಸವಿರುತ್ತದೆ. ಅದೇ ರೀತಿ ಸರ್ಕಾರಕ್ಕೂ ಹಣದ ಅವಶ್ಯಕತೆ ಇದೆ. ದೇಶೀಯ ಯೋಜನೆ, ವೆಚ್ಚ, ಸಹಾಯಗಳಿಗೆ ಹಾಗು ವಿದೇಶಿ ವ್ಯವಹಾರಗಳಿಗೆ ಹಣ ಬೇಕು. ದೇಶೀಯದಾದರೆ ರೂಪಾಯಿಯ ಚಲಾವಣೆ ಇದೆ. ವಿದೇಶದಲ್ಲಿ ನಮ್ಮ ರುಪಾಯಿ ವ್ಯವಹಾರಕ್ಕೆ ಚಲಾವಣೆಗೆ ಬರುವುದಿಲ್ಲ. ಅದಕ್ಕಾಗಿ ವಿದೇಶೀ ಹಣ ಬೇಕು. ಅದರಲ್ಲೂ ಜಗತ್ತಿನಲ್ಲಿ ಹೆಚ್ಚಿನ ಮಾನ್ಯತೆ ಪಡೆದಿರುವಂತಹ ಕರೆನ್ಸಿಗಳಾದರೆ ಜಗತ್ತಿನ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆ ಉತ್ತಮ. ಹೀಗಾಗಿ ನಮ್ಮ ದೇಶವು ವಿದೇಶೀ ಕರೆನ್ಸಿಯ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟಿದೆ. ದೇಶವು ವಿದೇಶಿ ಕರೆನ್ಸಿ ಎಷ್ಟು ಸಂಗ್ರಹಿಸಿದೆಯೋ ಅಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ವ್ಯವಹಾರಗಳು, ಸಾಲಪಾವತಿ, ಮೊದಲಾದವುಗಳಿಗೆ ಸುಲಭ. ಇದನ್ನು ವಿದೇಶಿ ವಿನಿಮಯ ಮೀಸಲು ನಿಧಿ ಎನ್ನುತ್ತಾರೆ. ಅನಿವಾಸಿ ಭಾರತೀಯರಿಂದ ಹೀಗೆ ಹರಿದು ಬರುವ ಹಣವು ದೇಶದ ವಿದೇಶೀ ಹಣದ ಬಲವನ್ನು ಹೆಚ್ಚಿಸುತ್ತದೆ. ಹೀಗಾಗಿ ಅನಿವಾಸಿಗಳಿಗೆ ಹೆಚ್ಚಿನ ಪ್ರೋತ್ಸಾಹ, ರಿಯಾಯಿತಿ, ನೀಡಿ ಹೆಚ್ಚು ರವಾನಿಸಲು ಸರ್ಕಾರ ಪ್ರೇರೇಪಿಸುತ್ತದೆ. ಹೀಗಾಗಿ ಅನಿವಾಸಿ ಠೇವಣಿಗಳಿಗೆ ಹೆಚ್ಚಿನ ಆದ್ಯತೆ ಉಂಟು. 

ಭಾರತೀಯ ನಾಗರೀಕನಾಗಿದ್ದು ಉದ್ಯೋಗ, ಸರ್ಕಾರಿ ಕೆಲಸ ಮೊದಲಾದವುಗಳ ಕಾರಣದಿಂದ ವಿದೇಶದಲ್ಲಿ ನೆಲಸ ಹೋಗುವವರಿಗೆ ಅನುಮತಿ, ರಹದಾರಿ ಪತ್ರ ನೀಡುವ ಬೇರೆ ಸಂಸ್ಥೆಗಳು, ವಿಭಾಗಗಳು ಕ್ರಮ ಕೈಗೊಳ್ಳುತ್ತವೆ. ಯಾರು ಅನಿವಾಸಿ ಭಾರತೀಯ ಎನ್ನುವುದಕ್ಕೆ ಎರಡು ವ್ಯಾಖ್ಯೆಗಳಿವೆ. 
1. ವಿವಿನಿಕಾ (ವಿದೇಶೀ ವಿನಿಮಯ ನಿಯಂತ್ರಣ ಕಾಯಿದೆ, 1999) ಪ್ರಕಾರ ಈ ಕೆಳಗಿನವರು ಅನಿವಾಸಿ ಭಾರತೀಯ ರಾಗುತ್ತಾರೆ. 

	ವಿದೇಶದಲ್ಲಿ ನೆಲೆಸುವವರ ಉದ್ಧೇಶವು ಬಹುಮುಖ್ಯವಾದುದು. ಅದು ವಿಶ್ವಸಂಸ್ಥೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಉದ್ಯೋಗವಾಗಬಹುದು ಅಥವಾ ಕೇಂದ್ರ /ರಾಜ್ಯ ಸರ್ಕಾರಗಳಿಂದ ನೇಮಕಗೊಂಡಿದ್ದಿರಬಹುದು. ದೀರ್ಘಾವಧಿ ಅಥವಾ ಅನಿರ್ದಿಷ್ಟ ಕಾಲ ವಿದೇಶದಲ್ಲಿ ನೆಲೆಸುವುದು ಇವೆಲ್ಲವೂ ಅನಿವಾಸಿ ಭಾರತೀಯನಾಗುವವನ ಲಕ್ಷಣಗಳು. 

2. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಭಾರತೀಯರು ಎಷ್ಟು ಕಾಲ ಭಾರತದಲ್ಲಿ ನೆಲೆಸಿರುತ್ತಾರೆಂಬುದರ ಮೇಲೆ ಅವರ ಅನಿವಾಸಿ ಸ್ಥಿತಿ ನಿರ್ಧರಿತವಾಗುತ್ತದೆ. ಒಂದು ಹಣಕಾಸಿನ ವರ್ಷದಲ್ಲಿ 182 ದಿನಗಳಿಗಿಂತ ಹೆಚ್ಚಾಗಿ ಯಾರಾದರೂ ಭಾರತದಲ್ಲೇ ವಾಸವಾಗಿದ್ದಲ್ಲಿ ಅವರು ನಿವಾಸಿ ಭಾರತೀಯರು ಅನಿವಾಸಿಗಳಲ್ಲ ಎಂದು ಈ ಕಾಯಿದೆಯು ಹೇಳುತ್ತದೆ.

	ಯಾವುದೇ ಉದ್ದೇಶಕ್ಕಾಗಲಿ ವಿದೇಶಿ ಹಣ ಭಾರತದೊಳಗೆ ಬರುವುದಕ್ಕೆ ವಿದೇಶೀ ಒಳ ರವಾನೆ  ಎನ್ನುತ್ತಾರೆ. ಹೀಗೆ ಬಂದ ರವಾನೆಗಳಿಗೆ ಠೇವಣಿದಾರರು ಬೇಡಿದಲ್ಲಿ ಬ್ಯಾಂಕು ಒಂದು ದೃಢೀಕರಣ ಪತ್ತವನ್ನು ನೀಡುತ್ತದೆ. ಇದನ್ನು ವಿದೇಶಿ ಒಳ ಹಣರವಾನೆ ದೃಢೀಕರಣ ಪತ್ರ ಎನ್ನುತ್ತಾರೆ. ಇದು ಇರುವುದು ಉತ್ತಮ. ಯಾಕೆಂದರೆ ವಿದೇಶೀ ಹಣವು ಅದಿಕೃತವಾಗಿ ಬಂದುದಕ್ಕೆ ಇದು ಸಾಕ್ಷಿಯಾಗುತ್ತದೆ. 

	ಅನಿವಾಸಿಗಳಿಗೆ ಹಲವು ರೀತಿಯ ಠೇವಣಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅ ಹಣವು ಪುನಃ ಮರಳಿ ಹಿಂಪಡೆಯಲು ರಿಸರ್ವ್ ಬ್ಯಾಂಕ್ ಪರವಾನಿಗಿ ಇದೆಯೇ ಅಥವಾ ಹಿಂಪಡೆತ ಸಾಧ್ಯವಿಲ್ಲವೇ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಪುನರಾಗತವೆಂದರೆ ವಿದೇಶದಿಂದ ಭಾರತಕ್ಕೆ ಬಂದಿರುವ ಹಣವನ್ನು ಪುನಃ ಕಳಿಸಿದವರ ದೇಶಕ್ಕೇ ಅಥವಾ ಯಾವುದೇ ದೇಶಕ್ಕೆ ವಾಪಸ್ಸು ಕಳಿಸಬಹುದೇ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಠೇವಣಿದಾರನ ಉದ್ದೇಶಕ್ಕೆ ಅನುಗುಣವಾಗಿ ಈ ಸೌಲಭ್ಯಗಳನ್ನು ಆಯ್ದುಕೊಳ್ಳಬೇಕು. ಅನಿವಾಸಿ ಠೇವಣಿಗಳನ್ನು ಈ ಆಧಾರದಿಂದ ಹಲವಾರು ವಿಧಗಳಾಗಿ ವಿಂಗಡಿಸಬಹುದು.

	ಮೊದಲಿಗೆ ಅನಿವಾಸಿ ಠೇವಣಿಗಳನ್ನು ಅನಿವಾಸಿಯಾಗಿರುವಾಗಲೇ ಹಿಂಪಡೆತ ಸಾಧ್ಯವಿರುವ  ಮತ್ತು ಸಾಧ್ಯವಿಲ್ಲದ ಠೇವಣಿಗಳೆಂದು ಎರಡು ಭಾಗವನ್ನು ಮಾಡಬಹುದು. ಈ ಎರಡು ಭಾಗಗಳಲ್ಲೂ ಮತ್ತೆ ಎರಡು ಭಾಗಗಳನ್ನು ಮಾಡಬಹುದು. ವಿದೇಶೀ ಕರೆನ್ಸಿ ಠೇವಣಿಗಳು ಮತ್ತು ಇಂಡಿಯಾದ ರೂಪಾಯಿ ಠೇವಣಿಗಳು  ಎಂದು ಎರಡು ಭಾಗವನ್ನು ಮಾಡಬಹುದು. ಇಂಡಿಯಾ ರೂಪಾಯಿ ಠೇವಣಿಗಳನ್ನು ಮತ್ತೆ ಎರಡು ಭಾಗಗಳನ್ನಾಗಿ ಮಾಡಬಹುದು. ಬೇಡಿಕೆ ಠೇವಣಿಗಳು ಮತ್ತು ಸಾವಧಿ ಠೇವಣಿಗಳು.  ಈ ಎಲ್ಲ ಠೇವಣಿಗಳಲ್ಲಿ ಬಹುತೇಕ ಠೇವಣಿಗಳು ಅನಿವಾಸಿ ಭಾರತೀಯನ ಹೆಸರಿನಲ್ಲೇ ಇಡಬೇಕು. ಇದರ ಜೊತೆಗೆ ನಿವಾಸಿ ಭಾರತೀಯನ ಹೆಸರನ್ನು ಸೇರಿಸುವಂತಿಲ್ಲ. ದೇಶೀಯರ ಹೆಸರನ್ನೂ ಸೇರಿಸಿ ಇಡಬಹುದಾದ ಅನಿವಾಸಿಯರ ಠೇವಣಿಯೂ ಒಂದಿದೆ. ಈ ಕೆಳಗಿನ ಠೇವಣಿಗಳ ವಿವರಣೆಯಿಂದ ಇದು ವಿಶದವಾಗಿ ತಿಳಿಯುತ್ತದೆ.  

  ಅನಿವಾಸಿ ಭಾರತೀಯರ ಠೇವಣಿಗಳು
|
	           |                                                                                             |
             ಪುನರಾಗತ ಸಾಧ್ಯ ಠೇವಣಿ                        ಪುನರಾಗತ ಸಾಧ್ಯವಿರದ ಠೇವಣಿ	
	           |		|
               	|	|                             |                                                  |
   ವಿದೇಶೀ ಕರೆನ್ಸಿ ಠೇವಣಿ            ಇಂಡಿಯನ್ ರೂಪಾಯಿ   ವಿದೇಶೀ ಕರೆನ್ಸಿ ಠೇವಣಿ  ಇಂಡಿಯನ್ ರೂಪಾಯಿ 
                               ಠೇವಣಿ                                ಠೇವಣಿ

      1.ವಿದೇಶೀ ಕರೆನ್ಸಿ ಠೇವಣಿ   ಅನಿವಾಸಿ (ಬಾಹ್ಯ)        ಎಫ್‍ಸಿಎನ್‍ಒಆರ್                   1. ಎನ್.ಆರ್.ಎನ್.ಆರ್.
		         ಎಫ್‍ಸಿಎನ್‍ಒಆರ್‍ಎ                  2. ಎನ್.ಆರ್.ಎಸ್.ಆರ್.
		       (ಇವೆರಡು ಈಗಿಲ್ಲ)     ಅನಿವಾಸಿಯ ಸ್ಥಳೀಯ ಹಣ  
ಉಳಿತಾಯ / ಚಾಲ್ತಿ
ಸಾವಧಿ ಠೇವಣಿ. 	 		    

 	ಅನಿವಾಸಿ ಠೇವಣಿಗಳು:  ಅನಿವಾಸಿಗಳಿಂದ ಬರುತ್ತಿರುವ-ಬರುವ ವಿದೇಶೀ ಕರೆನ್ಸಿಗಳ ಒಳ-ಹೊರವಿನ ಹರಿವಿನಿಂದ ಆಗುತ್ತಿರುವ ಹಲವಾರು ಗೊಂದಲಗಳನ್ನು ನಿವಾರಿಸಲೋಸುಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 1970ರಲ್ಲಿ ಅನಿವಾಸಿ ಠೇವಣಿ ಯೋಜನೆಯನ್ನು ವಿನ್ಯಾಸಗೊಳಿಸಿತು. ಈ ಯೋಜನೆಯು ಬೇಗ ಪ್ರಸಿದ್ಧಿಯನ್ನು ಹೊಂದಿ ಬಹು ಬೃಹತ್ತಾಗಿ ಬೆಳೆಯಿತು. ಮುಂದೆ ಇದು ಬೆಳೆದು ಇನ್ನೂ ಹಲವಾರು ವಿವಿಧ ಯೋಜನೆಗಳು ಇದರಲ್ಲಿ ಅಡಕವಾಗಿ ಅನಿವಾಸಿಗಳ ಒಳ-ರವಾನೆಗೆ ಸುಲಭ ಹಾಗು ಸರಳವಾಯಿತು. ಹೀಗೆ ಬೆಳೆದ ಹಲವಾರು ಅನಿವಾಸಿ ಠೇವಣಿಗಳ ಮಾಹಿತಿಯು ಹೀಗಿದೆ :
ಅನಿವಾಸಿ ಠೇವಣಿ  ರೂಪಾಯಿ ಠೇವಣಿಗಳು - ಪ್ರಾರಂಭವಾದದ್ದು 1970 ರಲ್ಲಿ.
ಅನಿವಾಸಿಗಳ ವಿದೇಶೀ ಕರೆನ್ಸಿ ಠೇವಣಿ (ಎ)  15-11-1075ರಲ್ಲಿ ಪ್ರಾರಂಭವಾಗಿ 15-8-1994 ರಲ್ಲಿ ರದ್ದಾಯಿತು. ಆದರೆ ಠೇವಣಿಗಳ ಪಾವತಿ ಮುಗಿದು ಎಲ್ಲ ಜವಾಬ್ದಾರಿ ಮುಗಿದದ್ದು ಆಗಸ್ಟ್ 1997 ರಲ್ಲಿ.

ಅನಿವಾಸಿ ವಿದೇಶೀ ಕರೆನ್ಸಿ ಠೇವಣಿ (ಬಿ)15-3-1993ರಲ್ಲಿ ಪ್ರಾರಂಭವಾಗಿ ಇನ್ನೂ ಚಾಲ್ತಿಯಲ್ಲಿದೆ.
ಅನಿವಾಸಿ ಪುನರಾಗತ ಸಾಧ್ಯವಿರದ ರೂಪಾಯಿ ಠೇವಣಿಯು 15-6-1992ರಲ್ಲಿ ಪ್ರಾರಂಭವಾಗಿ ಏಪ್ರಿಲೆ, 2002ರಲ್ಲಿ ರದ್ದಾಗಿದೆ. ಇದರ ಬಡ್ಡಿಯನ್ನು ಮಾತ್ರ 1-10-1994 ರಿಂದ ಪುನರಾಗತ ಸಾಧ್ಯಮಾಡಲಾಗಿತ್ತು. 

ಅನಿವಾಸಿ ವಿದೇಶೀ ಕರೆನ್ಸಿ ಪುನರಾಗತ ಸಾಧ್ಯವಿರದ ಠೇವಣಿ ಯೋಜನೆ ಮತ್ತು ವಿದೇಶೀ ಕರೆನ್ಸಿ ಪುನರಾಗತ ಸಾಧ್ಯವಿರದ ಖಾತೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿದರೂ ಬಹಳ ಕಾಲವಿರದೆ ಅವು 15-8-1994 ರಲ್ಲಿ ರದ್ದಾಗಿ ಹೋದವು. 

1. ಅನಿವಾಸಿ ಠೇವಣಿಗಳ ಸ್ಥೂಲ ಪರಿಚಯ ಹೀಗಿದೆ 

	ಅನಿವಾಸಿ (ಬಾಹ್ಯ) ರೂಪಾಯಿ ಠೇವಣಿ: ಇದು ಉಳಿತಾಯ ಹಾಗು ಸಾವಧಿ ಠೇವಣಿಗಳಲ್ಲಿರಬಹುದು. ಅನಿವಾಸಿಗಳಿಂದ ಬರುವ ವಿದೇಶಿ ವಿನಿಮಯವನ್ನು ಅವರ ವಿನಂತಿ/ಸೂಚನೆಗೆ ಅನುಗುಣವಾಗಿ ಅಂದಿನ ಪ್ರಚಲಿತವಿರುವ ದರಕ್ಕೆ ರೂಪಾಯಿಗೆ ಪರಿವರ್ತಿಸಿ ಖಾತೆಗೆ ಜಮಾ ಮಾಡಲಾಗುವುದು. ಸಾಮಾನ್ಯವಾಗಿ ಈ ಹಣರವಾನೆಗಳು ವಿದೇಶಿ ವಿನಿಮಯದ ಅಂದರೆ ವಿದೇಶೀ ಕರೆನ್ಸಿಯಲ್ಲೇ ನಮ್ಮ ದೇಶದ ಬ್ಯಾಂಕಿನ ವ್ಯಾಪಾರ ಸಂಬಂಧಿ ವಿದೇಶಿ ಬ್ಯಾಂಕಿನಲ್ಲಿರುವ ಭಾರತೀಯ ಬ್ಯಾಂಕಿನ ನೋಸ್ಟ್ರೋ ಅಂದರೆ " ನಮ್ಮ ವಿದೇಶಿ ಕರೆನ್ಸಿ " ಖಾತೆಗೆ ಜಮವಾಗಿರುತ್ತದೆ.  ಯಾವ ದಿನ ಈ ಖಾತೆಗೆ ಜಮವಾಗಿರುತ್ತದೋ ಅ ದಿನದಿಂದ ಅನಿವಾಸಿಗಳಿಗೆ ಸಾವಧಿ ಠೇವಣಿಯನ್ನು ಮಾಡಲಾಗುವುದು. ಇದಕ್ಕೆ ಮೌಲ್ಯಾಧಾರಿತ ದಿನಾಂಕ  ಎನ್ನುತ್ತಾರೆ. ವಿದೇಶಿ ವಿನಿಮಯ ವ್ಯವಹಾರಗಳಲ್ಲಿ ಈ ಮೌಲ್ಯಾಧಾರಿತ ದಿನಾಂಕ ಎನ್ನುವುದು ಬಹು ಮುಖ್ಯವಾದುದು.  ಉಳಿದಂತೆ ಇರುವ ಠೇವಣಿ ಅವಧಿ, ಬಡ್ಡಿದರ, ಠೇವಣಿದಾರರ ಹೆಸರು ಮೊದಲಾದವುಗಳು ಆಗಿಂದಾಗ್ಗೆ ಪ್ರಚಲಿತವಿರುವ ನಿಯಮದನ್ವಯವಾಗಿರುತ್ತವೆ.  
ಅನಿವಾಸಿ ವಿದೇಶಿ ಕರೆನ್ಸಿ ಠೇವಣಿ (ಎ): ಇದು 15-11-1975 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿತು. ಅನಿವಾಸಿಗಳು ತಾವು ದೇಶಕ್ಕೆ ಕಳಿಸುವ ವಿದೇಶಿ ಹಣವನ್ನು ವಿದೇಶಿ ಕರೆನ್ಸಿಯಲ್ಲೇ ಠೇವಣಿ ಮಾಡುವ ಯೋಜನೆ. ಇದರಲ್ಲಿ ವಿನಿಮಯ ದರ ವ್ಯತ್ಯಯದಿಂದ ನಷ್ಟಸಂಭವ ಇರುವುದಿಲ್ಲ. ಇದನ್ನು ಕನಿಷ್ಠ ಆರು ತಿಂಗಳಿಂದ ಗರಿಷ್ಠ ಮೂರು ವರ್ಷಗಳ ಅವಧಿಗೆ ಇಡಬಹುದು. ನಂತರ ಹಾಗೆಯೇ ನವೀಕರಿಸಬಹುದು. ಸಾಮಾನ್ಯವಾಗಿ ಈ ಠೇವಣಿಗಳಿಗೆ ಸ್ವಯಂನವೀಕರಣದ  ಸೂಚನೆ ಕೊಡುವುದು ಒಳಿತು. ಏಕೆಂದರೆ, ಈ ಠೇವಣಿಗಳನ್ನು 14 ದಿನಗಳಿಗಿಂತ ಪೂರ್ವ ದಿನಾಂಕದಿಂದ ನವೀಕರಿಸಲು ರಿಸರ್ವ್ ಬ್ಯಾಂಕಿನ ನಿರ್ಬಂಧವಿದೆ. ಅವಧಿ ಪೂವದಲ್ಲಿ ಠೇವಣಿಯನ್ನು ಮುಕ್ತಾಯಗೊಳಿಸಬಹುದು ಅಥವಾ ಪುನರಾಗತ ಮಾಡಿಕೊಳ್ಳಬಹುದು. ಇದು ಯಾವುದೇ ಭಾರತೀಯ ತೆರಿಗೆಗಳಿಂದ ಹೊರತಾಗಿದೆ. ಆದರೆ ಈ ಠೇವಣಿ ಯೋಜನೆಯನ್ನು ದಿನಾಂಕ 15-8-1994 ರಿಂದ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿತು. ಆದರೆ ಇದರ ಎಲ್ಲ ಪಾವತಿಗಳ ಜವಾಬ್ದಾರಿಯು ಆಗಸ್ಟ್ 1997 ರಲ್ಲಿ ಮುಗಿಯಿತು.
	
2. ಅನಿವಾಸಿ ವಿದೇಶಿ ಕರೆನ್ಸಿ ಠೇವಣಿ (ಬಿ) : 2. ಮೇಲಿನಲ್ಲಿರುವ ಠೇವಣಿಗೂ ಇದಕ್ಕೂ ಏನೂ 
ವ್ಯತ್ಯಾಸವಿಲ್ಲ.  `ಎ' ಠೇವಣಿಯನ್ನು ರದ್ದು ಮಾಡುವ ಮೊದಲು ಈ ಠೇವಣಿ ಯೋಜನೆಯನ್ನು 15-3-1993 ರಲ್ಲಿ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿತು. ಪ್ರಾರಂಭದಲ್ಲಿ ಆರು ತಿಂಗಳ ಅವಧಿಗೆ ಮಾತ್ರವೆಂದು ಪ್ರಾರಂಭವಾದ ಇದು ಕ್ರಮೇಣ ಅವಧಿಯನ್ನು ಮೂರು ವರ್ಷಗಳ ವರೆಗೆ ವಿಸ್ರರಿಸಿತು ಇವೆರಡರ ನಡುವಣ ವ್ಯತ್ಯಾಸ ಕೇವಲ ತಾಂತ್ರಿಕವಾದದ್ದು.. ಅಂದರೆ `ಎ' ಠೇವಣಿ ಯೋಜನೆಯಲ್ಲಿ ಬರುವ ವಿನಿಮಯ ದರದ ವ್ಯತ್ಯಯದ ನಷ್ಟವನ್ನು ರಿಸರ್ವ್ ಬ್ಯಾಂಕ್ ಭರಿಸುತ್ತಿತ್ತು. ಮೊದಮೊದಲು ಈ ಯೋಜನೆಯ ವ್ಯಾಪಕತೆ ಹೆಚ್ಚಲು ಪ್ರೋತ್ಸಾಹವಾಗಿ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿತು. ಕ್ರಮೇಣ ಎಲ್ಲ ಬ್ಯಾಂಕುಗಳಿಗೆ ಈ ನಷ್ಟವನ್ನು ಭರಿಸಲು ಆದೇಶಿಸುವ ಸಲುವಾಗಿ `ಎ' ಯೋಜನೆಯನ್ನು ರದ್ದು ಮಾಡಿ 'ಬಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಲ್ಲಿ ಏನೇ ವಿನಿಮಯ ದರದ ವ್ಯತ್ಯಯ ಬರಲಿ ಅದರ ನಷ್ಟವನ್ನು ಅಯಾಯ ಬ್ಯಾಂಕುಗಳೇ (ಅಧಿಕೃತ ವ್ಯವಹಾರಸ್ಥರು —) ಭರಿಸುವ ಪದ್ಧತಿ ಜಾರಿಗೆ ಬಂದಿತು. 

	3. ಅನಿವಾಸಿ ಪುನರಾಗತ ಸಾಧ್ಯವಿರದ ರೂಪಾಯಿ ಠೇವಣಿ ಯೋಜನೆ :  : ಈ ಠೇವಣಿ ಯೋಜನೆಯನ್ನು 16-06-1992ರಿಂದ ಪ್ರಾರಂಭ ಮಾಡಲಾಯಿತು. ವಿದೇಶೀ ಕರೆನ್ಸಿಯಲ್ಲಿ ಠೇವಣಿ ಇದ್ದು ಅದನ್ನು ಪುನರಾಗತ ಮಾಡಿದಲ್ಲಿ ನಮ್ಮ ದೇಶದ ವಿದೇಶಿ ವಿನಿಮಯ ಮೀಸಲು ನಿಧಿ ಕಡಿತವಾಗುವುದು. ಇದನ್ನು ಕಡಿಮೆಮಾಡಲೋಸುಗ ಅನಿವಾಸಿ ಭಾರತೀಯರಿಗೆ ಹೆಚ್ಚಿನ ಬಡ್ಡಿ ಕೊಟ್ಟು ಹೊಸ ಠೇವಣಿ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿತು. ಇದು ಪ್ರಾರಂಭವಾದಾಗ ಶೇಕಡಾ 16.5%, 17% ಬಡ್ಡಿಯನ್ನು ಕೊಡುತ್ತಿತ್ತು. ಕೆಲವು ವಿಶಿಷ್ಟವಾದವುಗಳಿಗೆ ಶೇಕಡ 18%ನ್ನೂ ಬ್ಯಾಂಕ್‍ಗಳು ಕೊಟ್ಟವು. ಇದರಿಂದ ಉತ್ತೇಜಿತರಾದ ಅನಿವಾಸಿಗಳು ಆಗ್ಗೆ ಹಣದ ಹೊಳೆಯನ್ನೇ ಭಾರತಕ್ಕೆ ಹರಿಸಿದರು. ಈ ಹಣವು ಪುನಃ ಪುನರಾಗತ ಮಾಡುವಂತಿಲ್ಲವಾದ್ದರಿಂದ ದೇಶದ ಕೋಶಾಗಾರಕ್ಕೂ ನಿಧಿಯು ಹೆಚ್ಚಿತು. ಆದರೆ ಕ್ರಮೇಣ ಬಡ್ಡಿ ದರವು ಇಳಿದು ಸಹಜ ಸ್ಥಿತಿಗೆ ಬಂದಿತು. ಆದರೂ 1-10-1994 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಆದೇಶ ನೀಡಿ ಈ ಠೇವಣಿಯ ಬಡ್ಡಿ ಹಣವನ್ನು ಪುನರಾಗತ ಸಾಧ್ಯಮಾಡಿತು. ಹೀಗಾಗಿ ಇದರ ಬಡ್ಡಿ ಹಣವನ್ನು ಅನಿವಾಸಿ ಖಾತೆಗೆ ಜಮಾ ಮಾಡಬಹುದಾಗಿತ್ತು ಅಥವಾ ಪುನರಾಗತ ಮಾಡಬಹುದಾಗಿತ್ತು. ಆದರ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್, 2002 ದಲ್ಲಿ ಈ ಠೇವಣಿ ಯೋಜನೆಯನ್ನು ರದ್ದುಗೊಳಿಸಿತು. ಆದರೆ ಅವಧಿ ಮುಗಿದಿರದ ಠೇವಣಿಗಳನ್ನು ಅವಧಿ ಮುಗಿದ ಮೇಲೆ ಮತ್ತೆ ನವೀಕರಿಸದೆ ಠೇವಣಿದಾರರಿಗೆ ಪಾವತಿ ಮಾಡಬೇಕೆಂದು ಆದೇಶಿಸಿದೆ.  ಈ ಖಾತೆಯನ್ನು ಅನಿವಾಸಿಗಳು ನಿವಾಸಿಗಳ ಜೊತೆಗೆ ಜಂಟಿಯಾಗಿ ಖಾತೆ ತೆರೆಯಲು ಆಸ್ಪದ ಕೊಡಲಾಗಿತ್ತು. 

	4. ಸಾಧಾರಣ ಅನಿವಾಸಿ ಖಾತೆ :  ಯಾವುದೇ ಭಾರತೀಯ ನಿವಾಸಿಯಾದ ವ್ಯಕ್ತಿಯು ಅನಿವಾಸಿಯಾದಲ್ಲಿ ಅನಿವಾಸಿ ಸ್ಥಿತಿಯ ಪರಯೋಜನಕ್ಕೆ ಅವನು ಅನಿವಾಸಿ ಖಾತೆಯನ್ನು ತೆರೆಯಲೇ ಬೇಕಾಗುತ್ತದೆ. ಈ ಖಾತೆಯು ಅನಿವಾಸಿಯ ವಿದೇಶಿ ಒಳ-ರವಾನೆ ಯಿಂದ ಮಾತ್ರ ಜಮಾಮಾಡಿ ತೆರೆಯಲು ಸಾಧ್ಯ.  ಆದರೆ ಅ ವ್ಯಕ್ತಿಯು ಅನಿವಾಸಿಯಾಗುವ ಮೊದಲು ಭಾರತದಲ್ಲಿ ಇರುವ ತನ್ನ ಬ್ಯಾಂಕುಗಳಲ್ಲಿನ ಉಳಿತಾಯ, ಠೇವಣಿ ಖಾತೆಗಳನ್ನು ತನ್ನ ಬ್ಯಾಂಕ್‍ಗೆ ಘೋಷಿಸಿ ದಾಖಲೆ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಅನಿವಾಸಿಯಾದೊಡನೆಯೇ ಅವನ ಎಲ್ಲ ದೇಶಿಯ ಖಾತೆಗಳು ತಾವಾಗಿಯೇ ಅನಿವಾಸಿ ಸಾಧಾರಣ ಖಾತೆ) ಆಗುತ್ತವೆ. ಅವುಗಳಿಗೆ ವಿದೇಶಿ ಒಳ-ರವಾನೆ ಹಣವನ್ನು ಜಮಾ ಮಾಡಬಹುದು. ಸ್ಥಳಿಯ ಜಮಾ ಖರ್ಚುಗಳನ್ನು ಅದರಲ್ಲಿ ಮಾಡಬಹುದು. ಆದರೆ ಅದಕ್ಕೆ ಸಿಗುವ ಬಡ್ಡಿಯ ಶೆಕಡಾ 30 ರಷ್ಟನ್ನು ಮೂಲದಲ್ಲೇ ಕಡಿತ ಮಾಡಿ ಆದಾಯ ತೆರಿಗೆ ಇಲಾಖೆಗೆ ಕಳಿಸುವುದು ಶಾಸನ ಬದ್ಧವಾದ ಕಡ್ಡಾಯ ನಿಯಮವಾಗಿದೆ.  ಅನಿವಾಸಿ ಭಾರತೀಯನು ಮೊಖ್ತ್ಯಾರುನಾಮೆ  ಮೂಲಕವಾಗಿಯೂ ಖಾತೆಯನ್ನು ತೆರೆದು ತನ್ನ ವ್ಯವಹಾರವನ್ನು ಬೇರೆಯವರಿಂದ ಮಾಡಿಸಬಹುದು. ಸ್ಥಳಿಯ ಜಮ ಖರ್ಚುಗಳನ್ನು ಅನಿವಾಸಿ (ಬಾಹ್ಯ) ರೂಪಾಯಿ ಖಾತೆಯಲ್ಲಿ ಮಾಡುವಂತಿಲ್ಲವಾದ್ದರಿಂದ ಈ ಖಾತೆಯೂ ಹೆಚ್ಚು ಸೂಕ್ತವಾದುದು. 		

	ನಿವಾಸಿಗಳ ವಿದೇಶಿ ಕರೆನ್ಸಿ ಖಾತೆ : ಇದು ಅನಿವಾಸಿಗಳು ತೆರೆಯ ಬಹುದಾದ ಠೇವಣಿ ಖಾತೆಯಲ್ಲ. ಅನಿವಾಸಿಗಳು ಶಾಶ್ವತವಾಗಿ ಭಾರತಕ್ಕೆ ಹಿಂದಿರುಗಿದಾಗ ಅವರ ಅನಿವಾಸಿ ಸ್ಥಿತಿ ಬದಲಾಗಿ ಅವರು ಕೇವಲ ಭಾರತೀಯ ನಿವಾಸಿಗಳಾಗುತ್ತಾರೆ. ಆದರೆ ಅವರು ತಂದಿರುವ ವಿದೇಶಿ ಕರೆನ್ಸಿ, ಅನಿವಾಸಿ ಖಾತೆಗಳು ಮೊದಲಾದವುಗಳನ್ನು ತಕ್ಷಣದಿಂದ ಪರಿವರ್ತಿಸಿ ನಿವಾಸಿಗಳ ವಿದೇಶಿ ಕರೆನ್ಸಿ ಖಾತೆ ಮಾಡಬೇಕು. ಇದು ರಿಸರ್ವ್ ಬ್ಯಾಂಕ್‍ನ ಕಡ್ಡಾಯ ನಿಯಮವಾಗಿದೆ. ಅದನ್ನು ಅವರು ನವೀಕರಿಸಲು ಪರಿಮಿತಿಯಿದೆ. ಜತೆಗೆ ಅವರು ಮತ್ತೆ ಅನಿವಾಸಿಗಳಾದಲ್ಲಿ ಸೂಕ್ತ ರೀತಿಯ ದಾಖಲೆ ಪತ್ರಗಳ ಸಾಕ್ಷಿಯೊಂದಿಗೆ ದೃಢೀಕರಿಸಿ ಮತ್ತೆ ಅವುಗಳನ್ನು ಅನಿವಾಸಿ ಖಾತೆ ಮಾಡಬಹುದಾಗಿದೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಅನುಮತಿಯು ಅಗತ್ಯವಾಗಿದೆ.

ಈ ಖಾತೆಗಳನ್ನು ಹೊಂದಿರುವ ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಕೆಲವು ನಿಯಮಾವಳಿಗಳನ್ನು ಪರಿಪಾಲಿಸಬೇಕಾಗುತ್ತದೆ. ಈ ಎಲ್ಲ ವ್ಯವಹಾರಗಳ ಸಾಂಖ್ಯಿಕ ವಿವರಣೆಯನ್ನು ಕಾಲ ಕಾಲಕ್ಕ್ಕೆ ವರದಿ ಮಾಡಬೆಕಾಗುತ್ತದೆ. ಅದಕ್ಕೆಲ್ಲಾ ಪೂರ್ವ ನಿರ್ಧರಿತ ನಮೂನೆ ಫಾರಂಗಳಿವೆ. ಅನಿವಾಸಿ ಖಾತೆಗಳ ಸಮರ್ಥ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವುದು ಅತ್ಯವಶ್ಯಕವಾಗಿದೆ. ಮಾಹಿತಿ ತಂತ್ರಜ್ಞಾನದ ಅಳವಡಿಕೆ ಅವಶ್ಯ. ಅಂತರ್ಜಾಲ ಸಪರ್ಕ, ಫ್ಯಾಕ್ಸ್ ಸೌಲಭ್ಯ ಮೊದಲಾದವುಗಳು ಬೇಕೇ ಬೇಕು. ಇಲ್ಲಿ ವಿಚಕ್ಷಣ ನಡವಳಿಕೆ, ಉತ್ತಮ ಸೇವಾ ವ್ಯವಸ್ಥೆ, ಸಮರ್ಥ ಕೆಲಸ ನಿರ್ವಹಣಾ ತಂಡ ಇದ್ದಷ್ಟೂ ಜನಮೆಚ್ಚಿಗೆ, ಜಗ ಮೆಚ್ಚಿಗೆ ಯಾಗುತ್ತದೆ.
(ಜಿ.ಆರ್.ವಿ,; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ